ವಿಶ್ವ ಆಹಾರ ದಿನಾಚರಣೆ - ಹಸಿವು ನೀಗಿಸಲು ಪಣತೊಡೋಣ

 


ಜಗತ್ತಿಗೇ ಕಂಟಕವಾಗಿ ಕಾಡುತ್ತಿರುವ ಕರೋನಾ ವೈರಸ್ ಸಾಂಕ್ರಾಮಿಕ ರೋಗವು ಇಡೀ ವಿಶ್ವಕ್ಕೆ ಆರೋಗ್ಯ ಬಿಕ್ಕಟ್ಟನ್ನು ತಂದೊಡ್ಡಿದೆ. ಇಂತಹ ಸಮಯದಲ್ಲಿ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ, ಕಾಳಜಿ ವಹಿಸುವುದು ಅತ್ಯವಶ್ಯಕ. ಇದಲ್ಲದೆ ನಮ್ಮ ನಿತ್ಯ ಅವಶ್ಯಕತೆಗಳಲ್ಲಿ ಆಹಾರವೂ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಪೌಷ್ಠಿಕ ಆಹಾರ ಸೇವನೆಯಿಂದ ಸದೃಢ ದೇಹ ನಮ್ಮದಾಗುತ್ತದೆ. ಆಹಾರದ ಮಹತ್ವವನ್ನು ತಿಳಿಸುವ ದೃಷ್ಟಿಯಿಂದ ಪ್ರತಿವರ್ಷ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ.  ಇದು 'ಹಸಿವಿನ ವಿರುದ್ಧ ಕ್ರಮ ತೆಗೆದುಕೊಳ್ಳುವ ದಿನ'. ಜಾಗತಿಕವಾಗಿ ಅಲ್ಲ, ಸ್ಥಳೀಯವಾಗಿ ಹಸಿವಿನ ನಿರ್ಮೂಲನೆಗೆ ಒಂದು ಹೆಜ್ಜೆ ಇಡಬೇಕಾದ ದಿನ. 

ವಿಶ್ವ ಆಹಾರ ದಿನಾಚರಣೆಯ ಹಿನ್ನಲೆ: 

ಪ್ರತಿ ವರ್ಷ, ವಿಶ್ವ ಆಹಾರ ದಿನವು ಆಹಾರವನ್ನು ಉತ್ತೇಜಿಸಲು ಮತ್ತು ಆಹಾರ ಸಂಪನ್ಮೂಲಗಳನ್ನು ಸಂರಕ್ಷಿಸಲು ಪ್ರಯತ್ನಿಸುತ್ತದೆ. ಈ ಹಿನ್ನಲೆಯಲ್ಲಿ ಹಲವಾರು ಕಂಪನಿಗಳು ವ್ಯವಹಾರಗಳು, ಎನ್ಜಿಒ ಗಳು, ಮಾಧ್ಯಮಗಳು, ಸಾರ್ವಜನಿಕರು, ಸರ್ಕಾರಗಳು ಹಲವು ರೀತಿಯ ಚಟುವಟಿಕೆಗಳನ್ನು ನಡೆಸುತ್ತವೆ. ಚಟುವಟಿಕೆಗಳ ಮೂಲಕ ಹಸಿವಿನಿಂದ ಬಳಲುತ್ತಿರುವವರಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಾರೆ. ಈ ವರ್ಷ ಪ್ರಸ್ತುತ ಸಾಂಕ್ರಾಮಿಕದ ಹಿನ್ನಲೆಯಲ್ಲಿ, "ಬೆಳೆಯಿರಿ, ಪೋಷಿಸಿ, ಉಳಿಯಲು ಒಟ್ಟಿಗೆ ಹೋರಾಡಿ.  ನಮ್ಮ ಕಾರ್ಯಗಳು ನಮ್ಮ ಭವಿಷ್ಯ ಎಂಬ ವಿಷಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ.

ಒಂದೆಡೆ ಆಹಾರೋದ್ಯಮ ಬೆಳೆಯುತ್ತಿದ್ದರೆ ಇನ್ನೊಂದೆಡೆ ಜನರು ಹಸಿವಿನಿಂದ ಸಾಯುತ್ತಿರುವ ಘಟನೆಗಳೂ ಹೆಚ್ಚುತ್ತಿದೆ. ಇದರ ಜೊತೆಗೆ ಆಹಾರವನ್ನು ರಕ್ಷಣೆ ಮಾಡುವ ಒಂದು ವ್ಯವಸ್ಥೆ ನಮ್ಮಲ್ಲಿ ಸಾಕಷ್ಟಿಲ್ಲ. ಹಸಿವು ಮತ್ತು ಬಡತನದಿಂದ ನರಳುತ್ತಿರುವ ಜನರಿಗೆ ಸೂಕ್ತ ಆಹಾರ ನೀಡಬೇಕು. ನಮ್ಮಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಎಂಬ ಉದ್ದೇಶದಿಂದ ಕೂಡ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ.

ಆಹಾರ ಸೇವಿಸುವುದು ಮಾನವನ ಮೂಲಭೂತ ಹಕ್ಕುಗಳಲ್ಲಿ ಒಂದು. ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಸಾಕಷ್ಟು ಆಹಾರ ಸೇವಿಸುವ ಹಕ್ಕು ಇದೆ. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ 5 ದಶಲಕ್ಷ ಮಕ್ಕಳು ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆ. ಈ ಪೈಕಿ 5 ವರ್ಷದ ಒಳಗಿನ ಮಕ್ಕಳೇ ಹೆಚ್ಚು. ಬಡ ರಾಷ್ಟ್ರಗಳಲ್ಲಿ ಶೇ.50 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ವಿಶ್ವ ಆಹಾರ ದಿನದಡಿಯಲ್ಲಿ 40 ದೇಶಗಳಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯನ್ನು ಕಡಿಮೆ ಮಾಡಲು ಪಣ ತೊಡಬೇಕಾಗಿದೆ.